ಡಂಬಾರ್ಟನ್ ಓಕ್ಸ್ ಸಮ್ಮೇಳನ -
ವಾಷಿಂಗ್ಟನ್ ಡಿ.ಸಿ.ಯ ಡಂಬಾರ್ಟನ್ ಓಕ್ಸ್ ಎಂಬಲ್ಲಿ ಎರಡನೆಯ ಮಹಾಯುದ್ಧದ ಕಾಲದಲ್ಲಿ (1944) ಸೇರಿದ್ದ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಬ್ರಿಟನ್, ಸೋವಿಯೆತ್ ಒಕ್ಕೂಟ ಮತ್ತು ಚೀನಗಳ ರಾಜತಾಂತ್ರಿಕ ಪ್ರವೀಣರ ಒಂದು ಸಭೆ. ರಾಷ್ಟ್ರಗಳ ಕೂಟದ ಸ್ಥಾನದಲ್ಲಿ ಯುದ್ಧಾನಂತರ ಕಾಲದಲ್ಲಿ ಹೊಸದೊಂದು ಭದ್ರತಾ ಸಂಸ್ಥೆಯ ಸ್ಥಾಪನೆಗೆ ಮೂಲಭೂತ ಸೂಚನೆಗಳನ್ನು ನಿರ್ಧರಿಸಲು ಈ ಸಮ್ಮೇಳನವನ್ನು ಕರೆಯಲಾಗಿತ್ತು. ವಿದೇಶ ಮಂತ್ರಿಗಳಿಗಿಂತ ಕೆಳಗಿನ ಮಟ್ಟದ ಸಭೆ ಇದು. ಇದರಲ್ಲಿ ಭಾಗವಹಿಸಿದ್ದವರು ಅಧಿಕಾರಿಗಳು. ಇವರ ತೀರ್ಮಾನಗಳು ಕೇವಲ ಸಲಹೆಗಳು. ಸಂಬಂಧಪಟ್ಟ ರಾಷ್ಟ್ರಗಳು ಇವನ್ನು ಅಂತಿಮವಾಗಿ ಒಪ್ಪಿಕೊಂಡಂತೆಂದು ಭಾವಿಸುವಂತಿರಲಿಲ್ಲ. ಆದ್ದರಿಂದ ಈ ಚರ್ಚೆಗಳನ್ನು ಅಧಿಕೃತವಾಗಿ ಸಂಭಾಷಣೆಗಳೆಂದು ಕರೆಯಲಾಯಿತು. ಆದರೂ ಈ ಸಭೆಯ ಪ್ರಾಮುಖ್ಯವನ್ನು ಅಲ್ಲಗಳೆಯುವಂತಿಲ್ಲ. ಪ್ರಪಂಚದ ಶಾಂತಿ ಭದ್ರತೆಗಳಿಗಾಗಿ ಅಂತರ ರಾಷ್ಟ್ರೀಯ ಸಂಸ್ಥೆಯೊಂದು ಅವಶ್ಯವೆಂಬುದಾಗಿ 1943ರಲ್ಲಿ ಮಾಸ್ಕೋದಿಂದ ಮಿತ್ರರಾಷ್ಟ್ರಗಳು ಮಾಡಿದ ಘೋಷಣೆಯನ್ನು ಕಾರ್ಯಗತಗೊಳಿಸಲು ಕೈಗೊಂಡ ಪ್ರಥಮ ಪ್ರಯತ್ನವಿದು.

ಈ ಸಮ್ಮೇಳನ ನಡೆದ ಸಮಯದಲ್ಲಿ ಜಪಾನ್ ವಿರುದ್ಧ ಸಮರದಲ್ಲಿ ಸೋವಿಯೆತ್ ದೇಶ ಸೇರಿರಲಿಲ್ಲ. ಅದು ಇನ್ನೂ ತಟಸ್ಥ ನೀತಿ ತಳೆದಿತ್ತು. ಆದ್ದರಿಂದ ಚೀನದ ಪ್ರತಿನಿಧಿಯೊಂದಿಗೆ ಸಮಾಲೋಚನೆಯಲ್ಲಿ ಭಾಗವಹಿಸಲು ಸೋವಿಯೆತ್ ದೇಶ ಒಡಂಬಡಲಿಲ್ಲ. ಆದ್ದರಿಂದ ಪ್ರಥಮತಃ ಅಮೆರಿಕ, ಬ್ರಿಟನ್ ಮತ್ತು ಸೋವಿಯೆತ್ ದೇಶಗಳ ಪ್ರತಿನಿಧಿಗಳು ಆಗಸ್ಟ್ 21ರಿಂದ ಸೆಪ್ಟೆಂಬರ್ 28ರವರೆಗೆ ಸಭೆ ಸೇರಿ ಸೂಚಿತ ಅಂತರರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಗೆ ಸಲಹೆಗಳ ಕರಡನ್ನು ರಚಿಸಿದರು. ಇವು ಡಂಬಾರ್ಟನ್ ಓಕ್ಸ್ ಸಲಹೆಗಳೆಂದು ಪ್ರಸಿದ್ಧವಾಗಿವೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 7ರವರೆಗೆ ಅಮೆರಿಕ, ಬ್ರಿಟನ್ ಮತ್ತು ಚೀನದ ಪ್ರತಿನಿಧಿಗಳು ಸೇರಿ ಈ ಸಲಹೆಗಳನ್ನು ಪರಿಶೀಸಲಿಸಿದರು. ಚೀನೀ ಪ್ರತಿನಿಧಿಯ ಒಪ್ಪಿಗೆಯೂ ಇವಕ್ಕೆ ದೊರಕಿತು. 			(ಯು.ಜಿ.ಎಂ.)

ಇವು ಭಾವೀ ಸಂಸ್ಥೆಯ ಸಮಗ್ರ ಯೋಜನೆಯೇನೂ ಆಗಲಿಲ್ಲ. ಸೂಚಿತ ಭದ್ರತಾ ಸಮಿತಿಯಲ್ಲಿ ಮತದಾನದ ವ್ಯವಸ್ಥೆ, ಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯತ್ವ-ಇವೆರಡು ವಿಚಾರಗಳಲ್ಲಿ ಸೋವಿಯೆತ್ ದೇಶಕ್ಕೂ ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೂ ನಡುವೆ ಒಮ್ಮತ ಬರಲಿಲ್ಲ. ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್, ಬ್ರಿಟಿಷ್ ಪ್ರಧಾನಿ ಚರ್ಚಿಲ್, ಸೋವಿಯೆತ್ ಪ್ರಧಾನಿ ಸ್ಟಾಲಿನ್ ಇವರು ಯಾಲ್ಟದಲ್ಲಿ ಸಭೆ ಸೇರಿ (1945) ಇವೆರಡು ಸಮಸ್ಯೆಗಳನ್ನೂ ಬಗೆಹರಿಸಿದರು. ಡಂಬಾರ್ಟನ್ ಓಕ್ಸ್ ಸಮ್ಮೇಳನದ ಸಲಹೆಗಳ ಆಧಾರದ ಮೇಲೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1945ರಲ್ಲಿ ವಿಶ್ವ ಸಂಸ್ಥೆಯ ಪ್ರಣಾಳಿಕೆ ರಚಿತವಾಯಿತು.		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ